ವರುಣ 2

	ಕರ್ನಾಟಕ ರಾಜ್ಯದ ಮೈಸೂರು ತಾಲ್ಲೂಕಿನ ಒಂದು ಗ್ರಾಮ. ಮೈಸೂರಿನ ಆಗ್ನೇಯಕ್ಕೆ 10 ಕಿಮೀ ದೂರದಲ್ಲಿ ತಿರುಮಕೂಡಲು ನರಸೀಪುರದ ರಸ್ತೆಯಲ್ಲಿದೆ. 9-10ನೆಯ ಶತಮಾನಗಳಲ್ಲಿ ಈ ಊರು ಚಾಳುಕ್ಯಾನ್ವಯಕ್ಕೆ ಸೇರಿದ್ದ ಒಂದು ಕಿರು ಸಾಮಂತ ಶಾಖೆಯ ನೆಲೆ ಯಾಗಿತ್ತು. ಆ ಕಾಲದ ಇಲ್ಲಿನ ಶಾಸನಗಳಲ್ಲಿ ಆ ವಂಶದ ಗೊಗ್ಗಿ, ನರಸಿಂಹ ಎಂಬುವರ ಉಲ್ಲೇಖಗಳೂ ದೊರಕುತ್ತವೆ. ಈ ಗ್ರಾಮದಲ್ಲಿ ಅದೇ ಕಾಲಕ್ಕೆ ಸಂಬಂಧಿಸಿದ ಕೆಲವು ಪ್ರಾಚೀನ ಅವಶೇಷಗಳಿವೆ. ಅವುಗಳಲ್ಲಿ ಮಹಾಲಿಂಗೇಶ್ವರ (ಶಾಸನಗಳಲ್ಲಿ ಭೂತೇಶ್ವರ) ಗುಡಿ ಮುಖ್ಯವಾದುದು. ಇದು ಗರ್ಭಗುಡಿ ಮತ್ತು ಸುಕನಾಸಿಗಳನ್ನು ಮಾತ್ರ ಒಳಗೊಂಡಿರುವ ಚಿಕ್ಕ ಕಟ್ಟಡ. ದೇವಾಲಯದ ಹೊರಭಿತ್ತಿಯ ಅಲಂಕರಣ ಒಳಗಿನ ವಿನ್ಯಾಸ ಇವೆಲ್ಲವೂ ಗಂಗ ಶೈಲಿಯಲ್ಲಿ ಇವೆ. ಈ ದೇವಾಲಯದ ಹೊರಗೋಡೆಗಳ ಮೇಲೆ ಕಪೋತದ ಕೆಳಗೆ ಪುರಾಣದ ಕಥೆಗಳನ್ನು ಒಳಗೊಂಡ ಶಿಲ್ಪಪಟ್ಟಿಕೆಗಳು ಇವೆ. ಇಲ್ಲಿನ ರಾಮಾಯಣ ಪಟ್ಟಿಕೆಗಳು ವಿಶಿಷ್ಟ ರೀತಿಯದಾಗಿವೆ. ಈ ಗುಡಿಯ ನವರಂಗದಲ್ಲಿ 9-10ನೆಯ ಶತಮಾನಕ್ಕೆ ಸೇರುವ ಕೆಲವು ವಿಗ್ರಹಗಳಿವೆ. ವರುಣದಲ್ಲಿ ಸು.11-12ನೆಯ ಶತಮಾನಕ್ಕೆ ಸೇರಿದ ಕೆಲವು ಜೈನ ಅವಶೇಷಗಳೂ ದೊರಕಿವೆ.

	ಇಲ್ಲಿನ ಮಹದೇವೇಶ್ವರ ದೇವಾಲಯ ಸ್ವಲ್ಪ ದೊಡ್ಡ ಕಟ್ಟಡ. ಇದನ್ನು 1828ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಧರ್ಮಪತ್ನಿ ಲಕ್ಷ್ಮೀವಿಲಾಸದ ದೇವಮ್ಮಣ್ಣಿ ಕಟ್ಟಿಸಿದರು. ನವರಂಗದಲ್ಲಿ ಪಾರ್ವತಿ, ನಂದಿ, ವಿದ್ಯಾಗಣಪತಿ ಮತ್ತು ಕೃಷ್ಣನ ಮೂರ್ತಿಗಳಿವೆ. ಗರ್ಭಗುಡಿಯಲ್ಲಿ ಗೋಳಾಕಾರದ ಶಿಲಾಲಿಂಗವಿದೆ. ತಾಮ್ರದ ಸದಾಶಿವ ಸಮೂಹವು ಸಹ ಇಲ್ಲಿದೆ. ವರುಣದ ಬಳಿ ಒಂದು ದೊಡ್ಡ ಕೆರೆ ಇದೆ.					
						(ಎಮ್.ಎಲ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ